Karnatakaexamshub


GK Tables Kannada

ಮಹಾಜನ್ ಆಯೋಗದ ವರದಿ

By Karnataka  |  27 Jul, 2026  |  Comments Off on ಮಹಾಜನ್ ಆಯೋಗದ ವರದಿ


1947ರಲ್ಲಿ ಭಾರತ ಸ್ವಾತಂತ್ರ್ಯಗೊಂಡ ನಂತರ ಮುಂಬಯಿ ಪ್ರಾಂತದ ಅಧೀನದಲ್ಲಿದ್ದ ಬೆಳಗಾವಿ ಜಿಲ್ಲೆಯು ಮುಂಬಯಿ ರಾಜ್ಯಕ್ಕೆ ಸೇರ್ಪಡೆಗೊಂಡಿತು. ಆದರೆ 1956ರಲ್ಲಿ ಭಾಷಾ ಆಧಾರದಲ್ಲಿ ರಾಜ್ಯಗಳು ಪುನರ್ವಿಂಗಡನೆಗೊಂಡು ಮೈಸೂರು ರಾಜ್ಯ ಉದಯವಾದ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯು ಕನ್ನಡ ನಾಡಿಗೆ ಸೇರ್ಪಡೆಗೊಂಡಿತು. ಬೆಳಗಾವಿ ಭಾಗದಲ್ಲಿ ಅಲ್ಪಸ್ವಲ್ಪ ಮರಾಠಿ ಪ್ರಾಬಲ್ಯ ಇದ್ದಾಗ್ಯೂ, ಇದು ಕನ್ನಡ ಭಾಷಿಕರೇ ಹೆಚ್ಚಾಗಿ ವಾಸಿಸುತ್ತಿರುವ ಭೂಭಾಗವಾಗಿದೆ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಮಹಾರಾಷ್ಟ್ರ ಸರ್ಕಾರವು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಲೇ ಇತ್ತು. ಹೀಗಾಗಿ ಕೇಂದ್ರ ಸರ್ಕಾರವು ಅಕ್ಟೋಬರ್ 25, 1966ರಲ್ಲಿ ಸುಪ್ರೀಂ ಕೋರ್ಟ್‌ನ ಮೂರನೇ ಮುಖ್ಯ ನ್ಯಾಯಾಧೀಶರಾಗಿ ನಿವೃತ್ತರಾಗಿದ್ದ ಪಂಜಾಬ್ ಮೂಲದ ಮೆಹರ್‌ಚಂದ್ ಮಹಾಜನ್ ನೇತೃತ್ವದ ಏಕ ಸದಸ್ಯ ಆಯೋಗವನ್ನು ರಚಿಸಿತು. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಗಳಾಗಿದ್ದ ವಿ.ಪಿ. ನಾಯಕ್ ಮಹಾಜನ್ ಆಯೋಗದ ಯಾವುದೇ ಶಿಫಾರಸ್ಸುಗಳನ್ನು ಒಪ್ಪಿಕೊಳ್ಳುವುದಾಗಿ ಹೇಳಿದ್ದರು. ಈ ಆಯೋಗವು ಕರ್ನಾಟಕ-ಕೇರಳ ನಡುವಿನ ಗಡಿವಿವಾದದ ಕುರಿತಂತೆ ವ್ಯಾಪ್ತಿಯನ್ನೂ ಹೊಂದಿತ್ತು.

ನವೆಂಬರ್ 15, 1966ರಿಂದ ಕಾರ್ಯಾಂಭ ಮಾಡಿದ ಮಹಾಜನ್ ಆಯೋಗವು, ಕರ್ನಾಟಕ-ಮಹಾರಾಷ್ಟ್ರ-ಕೇರಳ ನಡುವಿನ ಗಡಿ ವಿವಾದ ಕುರಿತಂತೆ ಆಗಸ್ಟ್ 25, 1967 ರಂದು ಕೇಂದ್ರ ಗೃಹ ಮಂತ್ರಾಲಯಕ್ಕೆ ತನ್ನ ವರದಿಯನ್ನು ಸಲ್ಲಿಸಿತು. ಈ ವರದಿಯ ಪ್ರಕಾರ,

  1. ಬೆಳಗಾವಿ ಕರ್ನಾಟಕದ ಭಾಗವಾಗಿಯೇ ಮುಂದುವರೆಯಬೇಕು.
  2. ಜತ್, ಅಕ್ಕಲಕೋಟೆ, ಸೊಲ್ಲಾಪುರ ಸೇರಿದಂತೆ 247 ಗ್ರಾಮಗಳು, ಸ್ಥಳಗಳು ಕರ್ನಾಟಕದ ಭಾಗವಾಗಿ ಸೇರಬೇಕು.
  3. ನಂದಗಡ, ನಿಪ್ಪಾಣಿ, ಖಾನಾಪುರ ಸೇರಿದಂತೆ 264 ಗ್ರಾಮಗಳು, ಸ್ಥಳಗಳು ಮಹಾರಾಷ್ಟ್ರ ರಾಜ್ಯದ ಭಾಗವಾಗಿ ಸೇರಬೇಕು.
  4. ಕೇರಳದ ಭಾಗವಾಗಿರುವ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು.

ಮಹಾರಾಷ್ಟ್ರ ಹಾಗೂ ಕೇರಳ ಸರ್ಕಾರಗಳು ಮಹಾಜನ್ ಆಯೋಗದ ಶಿಫಾರಸ್ಸುಗಳನ್ನು ತಿರಸ್ಕರಿಸಿ, ವರದಿಯನ್ನು ಪುನರ್‌ಪರಿಶೀಲಿಸಬೇಕೆಂದು ಕೇಳಿಕೊಂಡವು. ಕರ್ನಾಟಕ ಸರ್ಕಾರವು ಮಹಾಜನ್ ಆಯೋಗದ ವರದಿಯ ಅನುಷ್ಠಾನಕ್ಕಾಗಿ ಒತ್ತಾಯಿಸುತ್ತಲೇ ಇದೆ. ಬೆಳಗಾವಿ ನಗರದ ಮೇಲೆ ಕಣ್ಣಿಟ್ಟಿರುವ ಮಹಾರಾಷ್ಟ್ರ ಆಗಾಗ್ಗೆ ಗಡಿ ವಿವಾದವನ್ನು ಕೆದಕುತ್ತಲೇ ಇದೆ.

ಮಹಾಜನ್ ಆಯೋಗದ ವರದಿ ಜಾರಿಗೆ ಬಂದಿದ್ದರೆ ಕರ್ನಾಟಕಕ್ಕೆ ಆಗುತ್ತಿದ್ದ ಲಾಭಗಳು

  1. ಮಹಾರಾಷ್ಟ್ರದ ಇಡೀ ಅಕ್ಕಲಕೋಟೆ ತಾಲೂಕು ಕರ್ನಾಟಕಕ್ಕೆ ಸೇರುತ್ತಿತ್ತು.
  2. ದಕ್ಷಿಣ ಸೊಲ್ಲಾಪುರದ 65 ಗ್ರಾಮಗಳು ಕರ್ನಾಟಕಕ್ಕೆ ಸೇರುತ್ತಿದ್ದವು.
  3. ಮಹಾರಾಷ್ಟ್ರದ ಗಡಹಿಂಗ್ಲಜ ತಾಲೂಕಿನ 15 ಗ್ರಾಮಗಳು ಕರ್ನಾಟಕಕ್ಕೆ ಸೇರುತ್ತಿದ್ದವು.
  4. ಮಹಾರಾಷ್ಟ್ರದ ಜತ್ತ ತಾಲೂಕಿನ 44 ಗ್ರಾಮಗಳು ಕರ್ನಾಟಕಕ್ಕೆ ಸೇರುತ್ತಿದ್ದವು.
  5. ಕಾಸರಗೋಡು ಸೇರಿದಂತೆ ಕೇರಳದ ಚಂದ್ರಗಿರಿ ನದಿಯ ಉತ್ತರ ಭಾಗ ಕರ್ನಾಟಕದ ಪಾಲಾಗುತ್ತಿತ್ತು.

ಮಹಾಜನ್ ಆಯೋಗದ ವರದಿ ಜಾರಿಗೆ ಬಂದಿದ್ದರೆ ಕರ್ನಾಟಕಕ್ಕೆ ಆಗುತ್ತಿದ್ದ ನಷ್ಟಗಳು

  1. ಖಾನಾಪುರ ತಾಲೂಕಿನ 152 ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳ್ಳುತ್ತಿದ್ದವು.
  2. ಬೆಳಗಾವಿ ತಾಲೂಕಿನ 62 ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳ್ಳುತ್ತಿದ್ದವು.
  3. ಹುಕ್ಕೇರಿ ತಾಲೂಕಿನ 9 ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳ್ಳುತ್ತಿದ್ದವು.
  4. ಚಿಕ್ಕೋಡಿಯ ನಿಪ್ಪಾಣಿ ಸೇರಿದಂತೆ 41 ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರ್ಪಡೆಯಾಗುತ್ತಿದ್ದವು.
  5. ರಕ್ಷಣಾತ್ಮಕ ಉಪಾಯವಾಗಿ ಮಹಾರಾಷ್ಟ್ರಕ್ಕೆ ಸೇರುತ್ತಿತ್ತು.
  6. ಇತಿಹಾಸ ಪ್ರಸಿದ್ಧ ನಂದಗಡ ಮಹಾರಾಷ್ಟ್ರದ ಪಾಲಾಗುತ್ತಿತ್ತು.
manojns1997

error: Content is protected !!