Karnatakaexamshub


GK Tables Kannada

ಗೋಕಾಕ್ ವರದಿ

By Karnataka  |  27 Jul, 2026  |  Comments Off on ಗೋಕಾಕ್ ವರದಿ


1956ರಲ್ಲಿ ಭಾಷಾ ಆಧಾರದ ಮೇರೆಗೆ ರಾಜ್ಯಗಳು ಪುನರ್ವಿಂಗಡಣೆಯಾದ ನಂತರ, ಕರ್ನಾಟಕವು ಶಾಲಾ ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಂಡಿತು. 1960 ಮತ್ತು 70ರ ದಶಕದಲ್ಲಿ ಕನ್ನಡಿಗರಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗುತ್ತಾ ಹೋಯಿತು. ಜೊತೆಗೆ ವಿದ್ಯಾರ್ಥಿಗಳು ಪ್ರೌಢಶಾಲಾ ಶಿಕ್ಷಣದಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುವ ಉದ್ದೇಶದಿಂದ ಸಂಸ್ಕೃತವನ್ನು ಪ್ರಥಮ ಭಾಷೆಯನ್ನಾಗಿ ಓದುತ್ತಿದ್ದರು. ಹಾಗಾಗಿ ಪ್ರೌಢಶಾಲಾ ಶಿಕ್ಷಣದಲ್ಲಿ ಕನ್ನಡ ಭಾಷೆಯನ್ನು ಓದದೇ ಶಿಕ್ಷಣವನ್ನು ಮುಗಿಸಿ, ಇದರಿಂದ ಕನ್ನಡ ಭಾಷೆಗೆ ಕುಂದುಂಟಾಗುವ ಸಂಭವ ಒದಗಿ ಬಂದಿತ್ತು. ಇದು ಶಾಲಾ ಶಿಕ್ಷಣದಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕೆಂಬ ಹೋರಾಟಕ್ಕೆ ನಾಂದಿಯಾಯಿತು. ಈ ಹೋರಾಟಕ್ಕೆ ಅನೇಕ ಕನ್ನಡ ಪರ ಮನಸ್ಸುಗಳು, ಸಂಘಟನೆಗಳು, ರಾಜಕೀಯ ಪಕ್ಷಗಳು, ಸಾಹಿತಿಗಳು ದನಿಗೂಡಿಸಿದರು. ಕನ್ನಡದ ಪರವಾದ ದನಿಗಳು ಪ್ರಬಲಗೊಂಡ ಕಾರಣದಿಂದ ಶಾಲಾ ಶಿಕ್ಷಣದಲ್ಲಿ ಕನ್ನಡದ ಸ್ಥಾನಮಾನ ಕುರಿತಂತೆ ಅಧ್ಯಯನ ನಡೆಸಿ ವರದಿ ನೀಡಲು ಖ್ಯಾತ ಸಾಹಿತಿ ವಿ.ಕೃ. ಗೋಕಾಕರ ನೇತೃತ್ವದಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಆರ್. ಗುಂಡೂರಾವ್‌ರ ಸರ್ಕಾರ ಜುಲೈ 5, 1980ರಂದು ಸಮಿತಿಯೊಂದನ್ನು ರಚಿಸಿತು.

ಕನ್ನಡ ಸಾಹಿತ್ಯ ಲೋಕದ ದಿಗಜ್ಜರಲ್ಲಿ ಒಬ್ಬರಾಗಿದ್ದ ಡಾ. ವಿನಾಯಕ ಕೃಷ್ಣ ಗೋಕಾಕರು ವಿ.ಕೃ. ಗೋಕಾಕ್ ಎಂದೇ ಚಿರಪರಿಚಿತರು. ಅವರು ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಶ್ರೀ ಸತ್ಯಸಾಯಿ ಉನ್ನತ ಅಧ್ಯಯನ ಸಂಸ್ಥೆಯ ಉಪಕುಲಪತಿಗಳಾಗಿದ್ದರು. ಸರ್ಕಾರವು ವಿ.ಕೃ. ಗೋಕಾಕರ ನೇತೃತ್ವದ ಸಮಿತಿಯ ಮುಂದೆ ಈ ಕೆಳಗಿನ ಪ್ರಶ್ನೆಗಳನ್ನು ಇಟ್ಟಿತ್ತು.

  1. ಶಾಲಾ ಪಠ್ಯಕ್ರಮದಲ್ಲಿ ಓದಲು ಸಂಸ್ಕೃತವು ಒಂದು ವಿಷಯವಾಗಿ ಉಳಿಯಬೇಕೇ?
  2. ಹಾಗಿದ್ದಲ್ಲಿ, ಇದನ್ನು ಕನ್ನಡಕ್ಕೆ ಪರ್ಯಾಯವಾಗಿ ನೀಡಿದೆ ಎಂದು ಎನ್ನಿಸಿಕೊಳ್ಳದೆ ಉಳಿಸಿಕೊಳ್ಳುವುದು ಹೇಗೆ?
  3. ತ್ರಿಭಾಷಾ ಸೂತ್ರದ ಪ್ರಕಾರ ಕನ್ನಡವನ್ನು ಒಂದು ಕಡ್ಡಾಯ ವಿಷಯವಾಗಿ ಹೊಂದುವುದು ಸರಿಯೇ ಮತ್ತು ಇನ್ನುಳಿದ ಎರಡು ಭಾಷೆಗಳ ಆಯ್ಕೆಯನ್ನು ವಿದ್ಯಾರ್ಥಿಗಳ ಸ್ವಂತ ಇಷ್ಟೆಗೆ ಬಿಡಬಹುದೇ?

ಡಾ. ವಿ.ಕೃ. ಗೋಕಾಕರ ನೇತೃತ್ವದ ಸಮಿತಿಯು ವಿಸ್ತೃತ ಅಧ್ಯಯನ ಮತ್ತು ಸಮಾಲೋಚನೆ ನಡೆಸಿ ಜನವರಿ 27, 1981ರಂದು ಈ ಕೆಳಗಿನ ಶಿಫಾರಸ್ಸುಗಳನ್ನು ಸರ್ಕಾರದ ಮುಂದೆ ಮಂಡಿಸಿತು.

  1. 3ನೇ ತರಗತಿಯಿಂದಲೇ ಎಲ್ಲಾ ಮಕ್ಕಳಿಗೂ ಕನ್ನಡವನ್ನು ಕಡ್ಡಾಯ ವಿಷಯವಾಗಿ ಜಾರಿಗೊಳಿಸಬೇಕು.
  2. ಪ್ರೌಢಶಾಲೆಗಳಲ್ಲಿ ಕನ್ನಡವೊಂದೇ ಪ್ರಥಮ ಭಾಷೆಯಾಗಿರಬೇಕು.

ಸಮಿತಿಯು ಕನ್ನಡ ಮಾತನಾಡುವ ಮಕ್ಕಳಿಗೆ ಇದನ್ನು ಶಿಕ್ಷಣದಲ್ಲಿ 1981-82ರಿಂದಲೇ ಅನುಷ್ಠಾನಗೊಳಿಸಬೇಕು ಮತ್ತು ಇತರರಿಗೆ 1981-82 ರಿಂದಲೇ 3ನೇ ತರಗತಿಯಿಂದ ಕನ್ನಡವನ್ನು ಕಲಿಸಲು ಕ್ರಮ ಕೈಗೊಂಡು 1986-87 ರಿಂದ ಅನ್ವಯವಾಗುವಂತೆ ಜಾರಿಗೊಳಿಸಬೇಕು ಎಂದೂ ಶಿಫಾರಸ್ಸು ಮಾಡಿತು.

‘ಗೋಕಾಕ್ ವರದಿ’ ಎಂದರೆ ಪ್ರಖ್ಯಾತರಾಗಿರುವ ವಿ.ಕೃ. ಗೋಕಾಕ್ ನೇತೃತ್ವದ ಸಮಿತಿಯ ಶಿಫಾರಸ್ಸುಗಳು ಯಥಾವತ್ ಅನುಷ್ಠಾನಗೊಳ್ಳದೇ ಇರುವುದು, ಅದಕ್ಕಾಗಿ ನಡೆದ ಹೋರಾಟಗಳು, ವ್ಯಾಜ್ಯಗಳು, ವಿವಾದಗಳೂ ಈಗ ಇತಿಹಾಸಪ್ರಸಿದ್ಧ.

manojns1997

error: Content is protected !!